Monday, March 15, 2010

ನೆನಪಿಗಾದರೂ ಜೊತೆಗಿರು ...

"ಕಾವ್ಯಾ, ಯೇಳ್ತಿಯಾ, ಇವತ್ತು ಹಬ್ಬ ಕಣೆ, ಏನ್ ಹುಡ್ಗಿನಪ್ಪ ಎಷ್ಟ್ ಕೂಗುದ್ರು ಅಷ್ಟೇ .....", ಅಮ್ಮ ಕೂಗುವ ಕೂಗು ಎಲ್ಲಿಂದಲೋ ಬರುವ ಸುಪ್ರಭಾತದ ರಾಗಕ್ಕೆ ಸೇರಿಕೊಂಡಂತೆ ,ಕಿಟಿಕಿಯ ಸಣ್ಣ ಸೀಳಿನಿಂದ ಬರುವ ಎಳೆಬಿಸಿಲಿನ ಶಾಖದಂತೆ ನನ್ನ ಮುಟ್ಟುತ್ತವೆ. ಮನಸಿಲ್ಲದ ಮನಸಿನಿಂದ ಎದ್ದು ,"ಕರಾಗ್ರೆ ವಸುತೆ ಲಕ್ಷ್ಮಿ .." ಅಂತ ಕೈ ನೋಡ್ಕೊಳೋ ವೇಳೆಗೆ ಮತ್ತೆ ಎರಡೇ ನಿಮಿಷ ಮಲ್ಗೋಣ ಅನ್ಸತ್ತೆ .... ಈಗ ಮತ್ತೆ ಅಮ್ಮನ ರಾಗ.... "ಅಯ್ಯೋ ಇವ್ರು ಬಿಡಲ್ಲ , ಛೆ! " ಅಂದ್ಕೊಂಡು ಹೊರಗ ಬರೋವಷ್ಟ್ರಲ್ಲಿ ಹರಳೆಣ್ಣೆ ಥಪ ಥಪ ತಲೆಗೆ ತಟ್ಟಿ ಸ್ನಾನಕ್ಕೆ ಕಳಿಸಿಬಿಡ್ತಾರೆ ....

ಹಬ್ಬದಡಿಗೆಯ ರಸದೂಟವಾದ ಮೇಲೆ ಮಧ್ಯಾಹ್ನ ಸಣ್ಣ ನಿದ್ರೆಯ ಸವಿಗನಸಿನಲಿ ಅವನದೇ ಕಾರುಬಾರು , ಅವನ ಕಣ್ಣುಗಳು , ಕಡುಗಪ್ಪು ಕಣ್ಣುಗಳು, ಅದರಲ್ಲಿ ಅಚ್ಚಾಗಿರುವ ಕನಸುಗಳು ಮಿರಿ ಮಿರಿ ಮಿನುಗುತ್ತಿರುವಂತೆ ಭಾಸ .. ಅಷ್ಟೇ ಬೇರೇನೂ ಕಾಣೋಹಾಗೆ ಕಾಣಲ್ಲ ... ಸುಮಾರು ಹೊರಳಾಟದ ನಂತರ , ತಟಕ್ಕನೆ ಎದ್ದು ಕೂತು ನನ್ನಷ್ಟಕ್ಕೆ ನಾನು ನಗುವುದನ್ನು ಅಪ್ಪ ನೋಡಿದ್ರಾ?? ನೋ ಕ್ಲೂ !!!!

ಸಂಜೆ "ದಿ ಮ್ಯಾಜಿಕ್ ಆಫ್ ಕಾಫಿ" ಮುಗಿದ ಮೇಲೆ , ಹೊಸ ಬಟ್ಟೆ ಹಾಕಿ ಹಿಗ್ಗುವ ಕಾರ್ಯಕ್ರಮ .. ದೊಡ್ಡ ಝರಿಯ ಕೆಂಪು ಲಂಗ , ಗಿಣಿ ಹಸಿರಿನ ಸಣ್ಣ ತೋಳಿನ ಕುಪ್ಪಸ ತೊಟ್ಟು ಕನ್ನಡಿಯ ನನ್ನ ಬಿಂಬದಲ್ಲಿ ನಾನ್ ಕಂಡಿದ್ದ್ಯಾರನ್ನ? ನನ್ನ ಕಣ್ಣಿಗೆ ಕಾಡಿಗೆ ತಿದ್ದುವಾಗ ಅವನ ರೆಪ್ಪೆಯನ್ನ ಮುಟ್ಟಿದ ರೋಮಾಂಚನ ....

"ನಿನ್ನ ಕಣ್ಣ ನೋಟದಲ್ಲಿ ..." ಅರೇ, ಆ ಕಣ್ಣಿನ ಆಳದಲ್ಲಿ ಬಿದ್ದು ಮುಳುಗಲಾ ?

ಕೈ ಬಳೆಗಳು, ಕಾಲ್ ಗೆಜ್ಜೆ ಮಾಡೋ ಪ್ರತಿ ಶಬ್ದದಲ್ಲೂ ನನ್ನ ನೀನು ಕರಿತಿದಿಯ ಅನ್ಸತ್ತೆ ...

" ಬೇಕಂತ ಸದ್ದ್ ಮಾಡೋದು, ನನ್ನ ಗೊಳ್ ಹೊಯ್ಕೊಳೋದು ನಿನಗೇನು ಆಟಾನ .. ಕಳ್ಳ!"

ಅಂತ ಕನ್ನಡಿ ಜೊತೆ ಮಾತಾಡ್ತಾ ಇರೋಹಾಗೆನೆ ಅಪ್ಪ ಒಳಗೆ ಬಂದದ್ದನ್ನ ನೋಡಿ ಅವನ ನೆನಪನ್ನೇ ಮುದುಡಿ ಬಚ್ಚಿಟ್ಟುಕೊಳ್ಳುವಷ್ಟರಲ್ಲಿ "ಕಾವ್ಯಾ, ನಿನ್ನ ಸ್ನೇಹಿತ ಬಂದಿದಾನೆ" ಅಂದಿದ್ದು ಕಿವಿಗೆ ಬಿದ್ದಾಗ , ಮನಸ್ಸು ಸಾವಿರ ಅಡಿಗಳ ಮೇಲೆ ಹಾರುವ ಅನುಭವ , ಹೃದಯ ಬಡಿತ ಯಾರಿಗಾದರು ಕೆಳೀತೆಂಬ ಭಯ , ನಡುಗುವ ಕಾಲಿಗೆ ಸಮಾಧಾನ ಹೇಳಿ, ಒಂದೇ ಉಸಿರಿನಲ್ಲಿ , ಓಡಿ ಬಂದವಳಿಗೆ ಕಂಡದ್ದು ಅದೇ ಕಡು ಕಪ್ಪು ಕಣ್ಣಿನ , ಕನಸಿನ ಹುಡುಗ ....
ಜಗತ್ತನ್ನೇ ಮರೆತು ಅವನ ಕೈನ ಗಟ್ಟಿಯಾಗಿ ಹಿಡಿಯೋಣ ಅನ್ನೋ ಆಸೆ... ನನ್ನ ಲಂಗದ ಝರಿಯ ಎಳೆಯಿಂದ ಅವನನ್ನ ಕಟ್ಟಿ ಹಾಕೋಣ ಅನ್ನೋ ತವಕ ..
ಮಾತಿಲ್ಲದೆ ಮಾತಾಡುತ್ತಿದ್ದ ಆ ಪ್ರಶಾಂತತೆಯಲ್ಲಿ ಮೌನ ಮುರಿದದ್ದು ಅವನೇ ...

"ಹಬ್ಬದ ಹಾರ್ದಿಕ ಶುಭಾಶಯಗಳು .. ಅಪ್ಪಂಗೆ transfer ಆಗಿದೆ , ಮುಂದಿನ ವರ್ಷದ ಹಬ್ಬಕ್ಕೆ ನಿನಗೆ wish ಮಾಡೋಕೆ ಪತ್ರ ಬರೀತೀನಿ .. Thanks for being a wonderful friend ... bye "

ಅಂದು ತಿಗುಗಿ ನೋಡದೆ ಹೋದವನಿಗೆ ನಾನೇನು ಅಂತ ಹೇಳೋದು ?

8 ವರ್ಷದಿಂದ ಆ ಬಾರದ ಪತ್ರಕ್ಕೆ ಮಾತ್ರ ನನ್ನ ಉತ್ತರ ಸಿದ್ದವಿದೆ... "ಗೆಳೆಯ, ನೆನಪಿಗಾದರೂ ಜೊತೆಗಿರು .... ಇಂತಿ ನಿನ್ನ ಕಣ್ಣಿನ ಕನಸು ಕಂಡವಳು "